ನಿಜವಾದ ಕಲಿಕಾ ಸಂಪನ್ಮೂಲ.

 ಕಲಿಕೆಯ ಪ್ರಕ್ರಿಯೆಯಲ್ಲಿ ಸಂಪನ್ಮೂಲಗಳ  ಅರ್ಥ, ಮಹತ್ವ ಮತ್ತು ಕಲಿಕೆಯಲ್ಲಿ ಅವುಗಳ ಸ್ಥಾನಮಾನ  

(ಪೂರಕ ಅಥವಾ ಸಹಾಯಕ ಸಂಪನ್ಮೂಲ ಎನ್ನುವ ವಿಚಾರದ ಸತ್ಯಾಸತ್ಯತೆ. ಹಾಗಾದರೆ ಮುಖ್ಯವಾದುದು ಯಾವುದು? 

  ಭಾಷೆ ಮತ್ತು ಸಮಾಜ ವಿಜ್ಞಾನ ಕಲಿಕೆಗೆ ಸಂಪನ್ಮೂಲ ಎಲ್ಲಿವೆ?)

***


ನಿಜವಾದ ಸಂಪತ್ತು ವಸ್ತುವಿನಲ್ಲಿ ಇಲ್ಲ; ಅದರ ಬಗೆಗೆ ತಿಳಿವಳಿಕೆ ಪಡೆದಿರುವ ಮನುಷ್ಯನಲ್ಲಿದೆ. ಹೀಗಾಗಿ ನಿಜ ಸಂಪನ್ಮೂಲ ಮನುಷ್ಯನೇ – ನಮ್ಮ ಸಂದರ್ಭದಲ್ಲಿ- ಕಲಿಯುವವರೇ! 

***


ಎಲ್ಲರಿಗೂ ನಮಸ್ಕಾರಗಳು.

ನಮ್ಮ ಇಂದಿನ ಸಂವಾದಕ್ಕೆ ಒಂದು ತಾತ್ವಿಕ ನೆಲಗಟ್ಟು ಒದಗಿಸಿ ಅದಕ್ಕೆ ಒಂದು ದಿಕ್ಕು ತೋರಬಲ್ಲದು ಎಂದು ನಾನು ಅಂದುಕೊಂಡಿರುವ ಒಂದು ವಚನ ಹಾಡುವುದರೊಂದಿಗೆ ನಮ್ಮ ನಿಮ್ಮ ಮಾತುಕತೆ ಆರಂಭಿಸೋಣ:  


‘ತಾಳಮಾನ ಸರಿಸಮನರಿಯೇ ; ಓಜೆ ಬಜಾವಣೆಯ ಲೆಕ್ಕವನರಿಯೇ ; ಅಮೃತಗಣ ದೇವಗಣವನರಿಯೇ

ಕೂಡಲಸಂಗಮ ದೇವ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’


‘ಆನು ಒಲಿದಂತೆ ಹಾಡುವ ಸ್ವಾತಂತ್ರ್ಯ’ದ ಸುಖವನ್ನು ತಲೆ ಮೇಲಿಟ್ಟು ಮೆರೆಸುವ ಆಶಯ ಬಹಳ ಮಹತ್ವದ್ದು.   ನಾವು ಏನೂ ಆಗಿರಬಹುದು, ಗಂಡಸಾಗಿರಬಹುದು, ಹೆಂಗಸಾಗಿರಬಹುದು, ಶಿಕ್ಷಕರಾಗಿರಬಹುದು, ಅಧಿಕಾರಿಯಾಗಿರಬಹುದು, ರೈತನಾಗಿರಬಹುದು, ರಾಜಕಾರಣಿಯಾಗಿರಬಹುದು, ಕೂಲಿಕಾರ್ಮಿಕನಾಗಿರಬಹುದು, ಒಡೆಯನಾಗಿರಬಹುದು, ಶಿಕ್ಷಕರೂ ಆಗಿದ್ದಿರಬಹುದು... ಏನೇ ಆಗಿದ್ದರೂ ನಾವೆಲ್ಲರೂ ಮನುಷ್ಯರೇ; ಮನುಷ್ಯರಾಗಿ ನಮಗೆಲ್ಲ ಬಹುಮುಖ್ಯ ಎನಿಸಬೇಕಿರುವುದು ಈ ‘ಆನು ಒಲಿದಂತೆ ಹಾಡುವ ಸ್ವಾತಂತ್ರ್ಯ’. ಆನು ಒಲಿದಂತೆ ಹಾಡುವ ಸುಖವನ್ನು ನಾವೆಲ್ಲರೂ ಅನುಭವಿಸಬೇಕಿದೆ, ಅಲ್ಲವೆ?  ಆದರೆ, ಎಲ್ಲಿವೆ ಆ ನಮ್ಮ ಹಾಡುಗಳು? ನಾವು ಸದಾ ಇನ್ನೊಬ್ಬರ ಹಾಡನ್ನೇ ಹಾಡುತ್ತೇವೆ, ನಮ್ಮ ಹಾಡಿಗೆ ನಮ್ಮಲ್ಲೇ ಸ್ಥಾನವಿಲ್ಲ. ಇದು ನಮ್ಮ ಎಲ್ಲ ಬಗೆಯ ದುರಂತಗಳಿಗೆ ದುಃಖದ ಸ್ಥಿತಿಗೆ ಮೂಲ ಕಾರಣ, ಅನಿಸುತ್ತಿದೆ. ಇದಕ್ಕೆ ಪರಿಹಾರವೆಂದರೆ, ನಮ್ಮನಮ್ಮ ದನಿಗಳನ್ನು - ನಿಜವಾದ ಪದ- ಅಂತರ್ಧ್ವನಿಗಳನ್ನು ನಾವು   ಕೇಳಿಸಿಕೊಳ್ಳಲು ಸ್ವಾತಂತ್ರ್ಯ ಪಡೆಯಲೇಬೇಕಿದೆ.

 ಇನ್ನೂ ಹೆಚ್ಚು ಕಾಡುವ ಸಂಗತಿಯೊಂದಿದೆ ಈ ವಚನದಲ್ಲಿ:   ಅದು ಒಂದು ಷರತ್ತು ಎಂಬಂತೆ ತೋರುತ್ತಿದ್ದರೂ, ಅದು ಕೇವಲ ಷರತ್ತಲ್ಲ; ಅದು ಗಾಢವಾದ ವಾಸ್ತವ : ‘ಕೂಡಲಸಂಗಮ ದೇವ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂಬ ಸಾಲು.   ಆನು ಒಲಿದಂತೆ ಹಾಡುವ ಈ ವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದು ಘನತೆ, ಹೊಣೆಗಾರಿಕೆ ಬರಬೇಕಾದರೆ , ನಾನು ಗ್ರಹಿಸಿರುವಂತೆ,  ಅದರ ಮೂಲ ಆಶಯವನ್ನು, ‘ಕೂಡಲ ಸಂಗಮದೇವ ನಿಮಗೆ ಕೇಡಿಲ್ಲವಾಗಿ  ಆನು ಒಲಿದಂತೆ ಹಾಡುವೆ’ ಎಂಬ ಎಚ್ಚರ ಮತ್ತು ಬದ್ಧತೆ. ಒಂದು ವಿಶ್ವ ಪ್ರಜ್ಞೆಯ ಅರಿವಿನ ಹಿನ್ನೆಲೆಯಲ್ಲಿ ಆನು ಒಲಿದಂತೆ ಹಾಡುವೆ ಎನ್ನುವ ಆಶಯದ ಮೇಲೆ ಧ್ಯಾನಿಸುವುದು ಅಗತ್ಯವಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ವಿಶಾಲ ಅರ್ಥದ ಸಾಮೂಹಿಕ ಪ್ರಜ್ಞೆ ಎರಡನ್ನೂ ಏಕ ಕಾಲಕ್ಕೆ ಪ್ರಸ್ತಾಪಿಸುವ ಈ ವಚನದಲ್ಲಿ ಅವು ಒಂದರ ವಿರುದ್ಧ ಒಂದು, ಅಥವಾ ಒಂದು ಇದ್ದರೆ ಇನ್ನೊಂದಿಲ್ಲ ಎಂಬ ವಾದವಿಲ್ಲ. ಇದು ಅಚ್ಚರಿಯ ಮತ್ತು ಸಂತಸದ ಸಂಗತಿ. ಒಂದಕ್ಕೊಂದು   ಎಡೆಬಿಡದಂತೆ ಹೆಣೆದುಕೊಂಡಿರುವ, ಹಬ್ಬಿಕೊಂಡಿರುವ, ತಬ್ಬಿಕೊಂಡಿರುವ ವಿಶ್ವಾತ್ಮಕವಾದ ಸಾಮೂಹಿಕ ಪ್ರಜ್ಞೆಯ ಅರಿವಿನ ಹಿನ್ನೆಲೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹೆಚ್ಚಳವನ್ನು ಎತ್ತಿ ಹಿಡಿಯುವ ಈ ವಚನದ ಆಶಯ ನಮ್ಮ ಇಂದಿನ ಸಂವಾದದ ಬಹುಪಾಲು ಸಂಗತಿಗಳಿಗೆ ಮುಖಾಮುಖಿಯಾಗುವುದು ಹೇಗೆ ಎಂಬುದನ್ನು ಕಲಿಸುತ್ತದೆ ಎಂದು ಭಾವಿಸಿಕೊಂಡಿದ್ದೇನೆ. 

ವಿಶ್ವಾತ್ಮಕವಾದ ಸಾಮೂಹಿಕ ಪ್ರಜ್ಞೆಯ ಹಿನ್ನೆಲೆಯಲ್ಲಿ ಪ್ರತಿಪಾದಿತವಾಗುತ್ತಿರುವ ಈ ವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ನಾನೀಗ ಒಂದು ಜಾನಪದ ಕತೆಯನ್ನು ಹೇಳುತ್ತೇನೆ. ಅದು ನಮ್ಮ ಇಂದಿನ ಮುಖ್ಯ ವಿಷಯದ ಪ್ರವೇಶಕ್ಕೆ ತುಂಬ ಸಹಾಯ ಮಾಡುತ್ತದೆ ಎಂದು ಅನಿಸುತ್ತದೆ. 

‘ಜಾಣತನವನ್ನು ಮಾರಿದ ಹುಡುಗ’ 

“.....

.......

.......”

          ಈ ಜಾನಪದ ಕಥೆಯಲ್ಲಿನ ಕೆಲವು ಸಂಗತಿಗಳನ್ನು ಗಮನಿಸೋಣ. ಕಥೆಯ ಮುಖ್ಯ ಪಾತ್ರ ಒಬ್ಬ ಅನಾಥ ಹುಡುಗ. ಈ ಹುಡುಗ ಈ ಕಥೆಯಲ್ಲಿ ಒಬ್ಬ ಯಶಸ್ವಿ ಮನುಷ್ಯನಾಗುತ್ತಾನೆ. ಅದಕ್ಕಾಗಿ ಅವನ ಬಳಿಯಿದ್ದ ಬಂಡವಾಳ ಏನು? ಸಂಪನ್ಮೂಲ ಏನು? ಸ್ವಲ್ಪ ಮಾತ್ರವೇ ದುಡ್ಡು, ಆದರೆ ಅಗಾಧವಾದ, ತುಂಬ ವಾಸ್ತವಿಕವಾದ, ಅದೇ ವೇಳೆ ಮಾನವೀಯವಾದ ಜಾಣ್ಮೆ. ಅವನ ನಡೆ ಹೇಗಿದೆ? ಒಮ್ಮೆಗೇ ಆತ ನೂರು – ಸಾವಿರ ರೂಪಾಯಿ ಗಳಿಸಲು ಹಾತೊರೆಯುವುದೇ ಇಲ್ಲ. ಒಂದು ರೂಪಾಯಿ ಬಂದರೂ ಸ್ವೀಕರಿಸುತ್ತಾನೆ. ಮತ್ತು ತಾನು ಎಲ್ಲಿದ್ದಾನೆಯೋ ಅಲ್ಲಿಂದಲೇ ಆರಂಭಿಸುತ್ತಾನೆ. ತಾನಿರುವ ಸ್ಥಿತಿಯಿಂದ ವಿಮುಖನೂ ಆಗುವುದಿಲ್ಲ, ಬೇರೊಂದರ ಅವಲಂಬನೆ ಮಾಡುವುದಿಲ್ಲ. ಅಚ್ಚರಿಯೆಂದರೆ, ಈ ಕಥೆಯಲ್ಲಿನ ಶ್ರೀಮಂತ ಹಾಗೂ ರಾಜ ಇಬ್ಬರೂ ಬೇರೆಯವರನ್ನು ಅವಲಂಬಿಸುವವರಾಗಿದ್ದಾರೆ. ದುಡ್ಡಿದೆ, ಅಧಿಕಾರವಿದೆ, ಮೆದುಳಿಲ್ಲ. ಈ ವ್ಯಂಗ್ಯವನ್ನೂ ಶ್ರೀಮಂತ ಮತ್ತು ರಾಜನ ಮೂಲಕ ಕಥೆ ಸೂಕ್ಷ್ಮವಾಗಿ ಹೇಳುತ್ತಿದೆ ಎನಿಸುತ್ತದೆ. ಇಲ್ಲಿನ ಹುಡುಗನ ವಿಶೇಷವೆಂದರೆ, ಆತ ತನ್ನ ಕ್ರಿಯೆ – ಅಂದರೆ ಜಾಣತನ ಮಾರುವುದು – ನಿಲ್ಲಿಸುವುದೇ ಇಲ್ಲ.  ನಿರಂತರ ತೊಡಗಿಸಿಕೊಳ್ಳುವುದು ಮತ್ತು ನಿರಂತರವಾಗಿ ಬೆಳೆಯುತ್ತಲೇ ಇರುವುದು ಇವು ಜೀವಂತ ವ್ಯಕ್ತಿಯ ಲಕ್ಷಣ. ಇಂಥದೊಂದು ಕಥೆ ನಮ್ಮ ಜೀವನ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಅಲ್ಲವೆ? 

ಇದು ಮತ್ತು ಇಂಥ ಕಥೆಗಳು ನಿಜವಾದ ಸಂಪನ್ಮೂಲ, ಅದರಲ್ಲೂ ನಿಜವಾದ ಶೈಕ್ಷಣಿಕ ಸಂಪನ್ಮೂಲ ಆಗಬಹುದು ಎನ್ನಬಹುದೆ? ಈ ಘಟ್ಟದಲ್ಲಿ ನಾವು ಒಂದು ನಿಲುವಿಗೆ ಬರಬಹುದು ಎನಿಸುತ್ತಿದೆ. ಸಂಪನ್ಮೂಲ ಎಂದರೆ ಕೇವಲ ವಸ್ತುವಲ್ಲ, ನಮ್ಮ ನಮ್ಮ ಜೀವನ - ವೃತ್ತಿಜೀವನ ಸಂದರ್ಭಗಳನ್ನು ಸರಿಯಾಗಿ ಗ್ರಹಿಸುವ, ಗಮನಿಸುವ, ಸ್ಪಂದಿಸುವ ಮತ್ತು ಸೃಜನಾತ್ಮಕವಾಗಿ ಸಂವೇದನಾಶೀಲವಾಗಿ ಎದುರಿಸುವ ಮನೋಧರ್ಮ – ಮನೋಶಕ್ತಿ. 

 ಇನ್ನೂ ಕೆಲವು ಬೇರೆ ಬೇರೆ ಸಂಗತಿಗಳನ್ನು ನಮ್ಮ ಸಂವಾದದ ಒಳಗೆ ತಂದುಕೊಳ್ಳುವ ಮೂಲಕ ಇನ್ನೂ ಸರಿಯಾಗಿ ಮತ್ತು ಆಳವಾಗಿ ಈ ವಿಚಾರದ ಆಳಕ್ಕೆ ಹೋಗಬಹುದು.  

ನಾವೆಲ್ಲ ಇಂದು ಈ ಇಂಥ ಒಂದು ತಂತ್ರಜ್ಞಾನ ಸಹಾಯಿತ ಸಭೆಯಲ್ಲಿ ಬಹಳ ಗಂಭೀರವಾಗಿ, ಕಾಳಜೀಪೂರ್ವಕವಾಗಿ ಸೇರುವಂತಾಗಲು ಕಾರಣ ಈ ಕೊರೊನಾ ಅಥವಾ ಕೋವಿಡ್ 19 ರ   ಪರಿಣಾಮ ಸೃಷ್ಟಿಸಿರುವ, ಸೃಷ್ಟಿಸುತ್ತಲೇ ಇರುವ ಭಯ ಎಂದುಕೊಳ್ಳೋಣವೆ?!  ನಾವೆಲ್ಲ ಸಮಾನ ಮನಸ್ಕರು, ಗಂಭೀರ ಮನಸ್ಕರು ಹೀಗೆ ಸಭೆ ಸೇರುವಂತಾಗಲು ಕಾರಣ ಈ ಭಯವೇ ಆಗಿದ್ದರೆ, ನಿಧಾನಕ್ಕೆ ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಇದು. ಇದು ತಪ್ಪು ಎಂದಲ್ಲ. ಆದರೆ, ಇದಕ್ಕಿರುವ ಇತಿಮಿತಿಯನ್ನು ಅರ್ಥಮಾಡಿಕೊಳ್ಳಬೇಕಾದ ಜರೂರೂ ಇದೆ ಎಂದು ನನ್ನ ಅನಿಸಿಕೆ. ಕೋವಿಡ್ ಪರಿಣಾಮಗಳನ್ನು ವೈಜ್ಞಾನಿಕ - ಮಾನವೀಯ ಎಚ್ಚರ ಮತ್ತು ಹೊಣೆಗಾರಿಕೆಯಿಂದ ಎದುರಿಸಬೇಕಿದೆ. ಇದಕ್ಕೆ ಪ್ರಥಮ ಮತ್ತು ತುರ್ತಿನ ಆದ್ಯತೆ ನೀಡಬೇಕು. ಇದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಈಗಾಗಲೇ ಚರ್ಚೆ ಆಗುತ್ತಲೇ ಇದೆ. ನಾವೆಲ್ಲರೂ ಅದರ ಭಾಗವೂ ಬಾಧ್ಯಸ್ಥರೂ ಹೌದು. ಆದ್ದಾಗ್ಯೂ, ಶಿಕ್ಷಕರಾಗಿ ಶಿಕ್ಷಣಾಸಕ್ತರಾಗಿ ನಾವು ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ನನ್ನ ಪ್ರಾಮಾಣಿಕವಾದ ಅನಿಸಿಕೆ. ಅದೆಂದರೆ, ನಿಜವಾದ ಶಿಕ್ಷಣದ ನಿಜವಾದ ಸಂಪನ್ಮೂಲದ ಕಡೆಗೆ ನಮ್ಮ ಎಲ್ಲ ಶಕ್ತಿಯನ್ನು ಕ್ರೂಢೀಕರಿಸಬೇಕಿರುವುದು. ಅಂದರೆ, ನಮ್ಮ ಆಲೋಚನಾ ಮತ್ತು ಕ್ರಿಯಾಶಕ್ತಿಯ ಪ್ರಖರತೆಯು ಕೋವಿಡ್ ಸಂದರ್ಭದ ಸವಾಲುಗಳನ್ನು ಮಾತ್ರವಲ್ಲ; ಆನಂತರದ ಸಹಜ ಎಂದು ನಾವೆಲ್ಲ ಭಾವಿಸುವ ಸಂದರ್ಭದ ಸವಾಲುಗಳನ್ನು ಎದುರಿಸಲೂ ಸಮರ್ಥವಾಗಿರಬೇಕಾದ ತುರ್ತು ಇದೆ. (ವೈಯಕ್ತಿಕವಾಗಿ ನನ್ನ ದೃಷ್ಟಿಯಲ್ಲಿ ಕೋವಿಡ್ ಪೂರ್ವ, ಕೋವಿಡ್ ಅವಧಿ, ಕೋವಿಡ್ ನಂತರ ಎಂಬ ಸ್ಥಿತಿಗಳು ತಮ್ಮ ಹೊರಮೈ ತೋರಿಕೆಯಲ್ಲಿ ಬೇರೆಬೇರೆಯೇ ವಿನಃ, ಸತ್ವದಲ್ಲಿ ಅವೆಲ್ಲ ಒಂದೇ.) ನಿಜವಾದ ಶಿಕ್ಷಣ ಎಂದರೇನು? ಎಂಬ ಪ್ರಶ್ನೆಗೆ ನಿಜವಾದ ಉತ್ತರಗಳನ್ನು ಹಾಗೂ ಕ್ರಿಯಾಸಾಧ್ಯ ಮಾರ್ಗಗಳನ್ನು ಕಂಡುಕೊಳ್ಳುವುದು ಇದು ನಿರಂತರವಾದ ಸವಾಲು.  


ಈ ಅಂಶವನ್ನು ಸ್ವಲ್ಪ ವಿಸ್ತಾರವಾಗಿ ಮತ್ತು ವಿವರವಾಗಿ ನೋಡೋಣ. ನಾನು ಒಬ್ಬ ಭಾಷೇ- ಸಾಹಿತ್ಯ ಹಾಗೂ ಸಮಾಜ ವಿಜ್ಞಾನದ ವಿದ್ಯಾರ್ಥಿ: ಹೀಗಾಗಿ ಸಹಜವಾಗಿ ನನ್ನ ಚಿಂತನೆಗಳಿಗೆ ಆಹಾರ ಈ ಮೂಲಗಳಿಂದಲೇ ಬರುತ್ತದೆ. 

ಭಾಷಾ ಶಿಕ್ಷಣದಲ್ಲಿ ನಾವು ಕಲಿಸುವ ಭಾಷೆ ಯಾವುದು? ಇದೊಂದು ಸರಳ ಉತ್ತರವಿರುವ ಪ್ರಶ್ನೆಯಂತೆ ತೋರುತ್ತದೆ. ಕನ್ನಡ, ತೆಲುಗು, ತಮಿಳು, ಉರ್ದು, ಮರಾಠಿ ಅಥವಾ - ಮೆತ್ತಗೇ ಹೇಳತೇನೆ – ಇಂಗ್ಲೀಷೂ ಆಗಿರಬಹುದು. ಈಗ ನಮ್ಮ ಸಂವಾದಕ್ಕೆ ನಿರ್ದಿಷ್ಟತೆ ಇರಲಿ ಎಂದು ಕನ್ನಡವನ್ನು ತೆಗೆದುಕೊಳ್ಳೋಣ. ಕನ್ನಡ ಹಿನ್ನೆಲೆಯುಳ್ಳ ಯಾವುದೇ ವಯಸ್ಸಿನ ಮಗುವಿಗೆ ನಾವು ಕಲಿಸುವ ಕನ್ನಡ ಯಾವುದು? ಮನೆ ಮಾತು - ಗ್ರಂಥಸ್ಥ ಮಾತುಗಳ ಚರ್ಚೆ ಬೇರೆ ಬೇರೆ ಸಂದರ್ಭದಲ್ಲಿ ಸಾಕಷ್ಟಾಗಿದೆ. ಅದರ ವಿವರಗಳು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಅದನ್ನು ಅಲ್ಲಿಗೇ ಬಿಟ್ಟು ಪ್ರಶ್ನೆಯ ಒಳತೋಟಿಗಳನ್ನು ಕಂಡುಕೊಳ್ಳಲು ಯತ್ನಿಸೋಣ. ಚಿಕ್ಕ ಮಗುವಿನ ಉದಾಹರಣೆಯೊಂದಿಗೆ ಸಂವಾದ ಮುಂದುವರೆಸೋಣ.  ಮಗುವಿನ ಭಾಷೆ ಹೃದಯದ ಭಾಷೆಯೋ - ಬುದ್ಧಿಯ ಭಾಷೆಯೋ? ಮಗುವಿನ ಭಾಷೆಯಲ್ಲಿ ಬುದ್ಧಿಯ ಅಂಶಗಳು ಇರುವುದಿಲ್ಲ, ಇರಬಾರದು ಎಂದಲ್ಲ; ಆದರೆ, ಅಲ್ಲಿ ಹೃದಯದ ಅಂಶವೇ ಹೆಚ್ಚಿದೆ. ನಾವು ಕಲಿಸುವ ಭಾಷೆಯಲ್ಲಿ ಬುದ್ಧಿಯ ಅಂಶಗಳನ್ನು ಒಳಗೊಂಡೂ ಹೃದಯ ಭಾಷೆಗೆ ಹೆಚ್ಚು ಒತ್ತುಕೊಡಬೇಕಾದ ಅಗತ್ಯವನ್ನು ಮನಗಾಣಬೇಕಿದೆ. 

ಅಂದರೆ, ಮಗುವಿನ ಭಾಷೆಯ ಹೃದಯದ ಭಾಷೆಯ ಮೂಲ ಎಲ್ಲಿದೆ? ಮಗುವಿನ ಒಳಗೂ ಇದೆ, ಹೊರಗೂ ಇದೆ. ಅಂದರೆ, ಅಲ್ಲಿ ಕತೆಗಳಿವೆ, ಹಾಡುಗಳಿವೆ, ನಲಿವುಗಳಿವೆ, ನೋವುಗಳಿವೆ, ಗಾದೆಮಾತುಗಳಿವೆ, ಬೈಗಳುಗಳಿವೆ, ಜಗಳಗಳಿವೆ, ನಾಣ್ನುಡಿಗಳಿವೆ, ತತ್ವಪದಗಳಿವೆ,  ಬಯಲಾಟ, ಯಕ್ಷಗಾನಗಳಿವೆ, ಹಬ್ಬಗಳಿವೆ, ಹೊಲಗದ್ದೆ ಇತ್ಯಾದಿ ಏನೆಲ್ಲವೂ ಅಲ್ಲಿವೆ. ನಿಜವಾದ ಭಾಷಾ ಶಿಕ್ಷಣವು ಇದೆಲ್ಲವನ್ನೂ ಒಳಗೊಂಡಿರಬೇಕಾಗುತ್ತದೆ. ಈಗಿರುವಂತೆ ನಮ್ಮ ಭಾಷಾ ಪಠ್ಯಪುಸ್ತಕಗಳಲ್ಲಿ ಇವಾವುವೂ ಇಲ್ಲವೆಂದಲ್ಲ. ಎಲ್ಲವೂ ಇವೆ ಸ್ವಲ್ಪ ಸ್ವಲ್ಪ, ಸ್ಯಾಂಪಲ್ಲಿಗೆಂಬಂತೆ! ಇರಲಿ, ಅವುಗಳು ಮಗುವಿಗೆ ಬೌದ್ಧಿಕ ಸಂಗತಿಗಳಾಗಿ ಹೋಗುತ್ತಿವೆಯೋ ಅಥವಾ ಹೃದಯದ ಸಂಗತಿಗಳಾಗಿ ಹೋಗುತ್ತಿವೆಯೋ? ಇದು ಮುಖ್ಯಪ್ರಶ್ನೆ. 

ಉದಾಹರಣೆಗೆ ತೆಗೆದುಕೊಳ್ಳೋಣ. ಸಿದ್ಧಲಿಂಗಯ್ಯನವರ ಒಂದು ಪದ್ಯ ಪಠ್ಯದಲ್ಲಿದೆ ಎಂದುಕೊಳ್ಳೋಣ. ಪ್ರೀತಿಯ ಗಂಗೆ ಹರಿಯುತಲಿರಲಿ ಅಂತರಂಗದ ಕಣಿವೆಯಲ್ಲಿ....

ಕವನದ ಮೂಲ ಆಶಯ ಹೃದಯಕ್ಕೇ ಸಂಬಂಧಿಸಿರುವುದು. ಇದು ಮಕ್ಕಳಿಗೆ ತಟ್ಟಬೇಕು. ಅದು ಸಾಧ್ಯವಾಗುವುದು ಮೊದಲು ಅದು ನಮ್ಮ ಹೃದಯವನ್ನು ತಟ್ಟಿದಾಗ. ಅಲ್ಲಿ ಒಂದು ರುಚಿ – ಸಾಹಿತ್ಯಕ ರುಚಿ ಹುಟ್ಟುತ್ತದೆ. ಆ ರುಚಿಯನ್ನು ತಣಿಸಬೇಕು; ಆ ಹಸಿವನ್ನು ಇಂಗಿಸಬೇಕು. ಇದು ಯಾವಾಗ ಸಾಧ್ಯ? ಆ ಕವಿಯ ಇನ್ನಷ್ಟು ಅಂಥ ಪದ್ಯಗಳನ್ನು, ಜೊತೆಗೆ ಇನ್ನೂ ಕೆಲವು ಕವಿಗಳ ಅಂಥ ಇನ್ನಷ್ಟು ಪದ್ಯಗಳನ್ನು ನಾವು ಅನುಭವಿಸಿದಾಗ.... ಇದಕ್ಕೆ ಅವಕಾಶವಿದೆಯೆ? ಇಲ್ಲ ಎಂದುಕೊಂಡುಬಿಟ್ಟರೆ ಮುಂದೆ ಚರ್ಚೆ ಇಲ್ಲ. ಇರಬಹುದು ಹುಡುಕೊಣ ಎಂದರೆ ದಾರಿಗಳು ಇವೆ. ಮೊದಲ ದಾರಿ ನಮ್ಮನ್ನು ಗ್ರಂಥಗಳತ್ತ-ಗ್ರಂಥಾಲಯಲದತ್ತ ಕರೆದುಕೊಂಡು ಹೋಗುತ್ತದೆ. ಅಲ್ಲಿ ಕವಿಯ/ಕವಿಗಳ ಗ್ರಂಥಗಳು ಇರಬೇಕಾಗುತ್ತದೆ.  ಇಲ್ಲೊಂದು ಪ್ರಶ್ನೆಯನ್ನು ಕೇಳಿಕೊಳ್ಳೋಣ. ನಾವುಗಳು ಅಂದರೆ ಶಿಕ್ಷಕರುಗಳು ಇರುವ ಪಠ್ಯಪುಸ್ತಕದಲ್ಲಿನ ಪಾಠಗಳನ್ನು ಕಲಿಸುವವರಾಗಬೇಕೋ ಅಥವಾ ಆ ಪಠ್ಯಪುಸ್ತಕದ ಮೂಲಕ ಅರ್ಥಪೂರ್ಣ ಕಲಿಕೆಯನ್ನು  ಸಾಧ್ಯ ಮಾಡಿಸುವವರಾಗಬೇಕೋ? ನಮ್ಮ ಉತ್ತರ ಎರಡನೆಯದು ಆಗಿರುವುದಾರೆ ಆಗ ಸಂಪನ್ಮೂಲಗಳ ಅಗತ್ಯತೆ ಉಂಟಾಗುತ್ತದೆ. ಒಬ್ಬ ಕವಿಯ ನೂರಾರು ಅಲ್ಲದಿದ್ದರೂ ೩೦-೪೦ ಪದ್ಯಗಳನ್ನಾದರೂ ನಾವು ನಮ್ಮ ಹೃದಯದಲ್ಲಿ ಇರಲು ಸ್ಥಳಾವಕಾಶ ಮಾಡಿಕೊಡಬೇಕಾಗುತ್ತದೆ. ಆ ಎಲ್ಲ ೩೦-೪೦ ಪದ್ಯಗಳನ್ನು ಮಕ್ಕಳಿಗೆ ಹೇಳಬೇಕೆ? ಇಲ್ಲ, ಆ ಪದ್ಯಗಳ ಸತ್ವ ನಮ್ಮಲ್ಲಿ ಇರುವುದಾದರೆ, ಅದೇ ಸಂಪನ್ಮೂಲ, ಅದನ್ನು ಮಕ್ಕಳಿಗೆ ಅವರವರ ವಯೋಮಾನ, ಮನೋಧರ್ಮ, ಮನಸ್ಥಿತಿಗಳಿಗೆ ಅನುಗುಣವಾಗಿ ಹಣಿಸಬೇಕು! ‘ನನ್ನ ಪಾಡು ನನಗಿರಲಿ, ಅದರ ಹಾಡನ್ನಷ್ಟೇ ನಿನಗೆ ಹಣಿಸುವೆ’ ಎಂಬ ಕವಿ ಅಂಬಿಕಾತನಯದತ್ತರ ಮಾತು ನಮಗಿಲ್ಲಿ ದಾರಿ ತೋರುತ್ತದೆ ಎನಿಸುತ್ತದೆ. ನಾವು ಎಲ್ಲವನ್ನೂ ಕಲಿಸಬೇಕಿಲ್ಲ; ನಾವು ಕಲಿಯುತ್ತಿದ್ದರೆ, ಮಕ್ಕಳೂ ನಮ್ಮ ಜೊತೆಗಿದ್ದರೆ ಅಲ್ಲಿಯೂ ಆ ಕಲಿಕಾ ಪರಿಣಾಮ ಉಂಟಾಗುತ್ತದೆ, ಪ್ರಕ್ರಿಯೆ ಆಗುತ್ತದೆ. ವೈರಸ್ ಹರಡುತ್ತದೆ ಎಂಬುದರ ಬಗ್ಗೆ ನಮಗೆ ಸಂಶಯವಿಲ್ಲ, ಆದರೆ ಕಲಿಕೆ ಹರಡುವುದರ ಬಗ್ಗೆ ಸಂಶಯ ಏಕಿರಬೇಕು? 


ಇನ್ನು ಸಮಾಜ ವಿಜ್ಞಾನದ ಕಡೆಗೆ ಸ್ವಲ್ಪ ಗಮನ ಹರಿಸೋಣ.  ನಾನು ಪ್ರಾಥಮಿಕ ಶಾಲಾ ವಿದ್ಯಾರ್ಥಿ ಆಗಿದ್ದಾಗಿನಿಂದಲೂ ನನಗೊಂದು ಪ್ರಶ್ನೆ ಕಾಡುತ್ತಿತ್ತು. ನಮ್ಮೂರು ಈಗಿನ ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕಿನಲ್ಲಿರುವ ಒಂದು ಪಟ್ಟಣ ನರೇಗಲ್ಲ. ಅಲ್ಲಿ ನಾಲ್ಕೈದು ಪುರಾತನ ದೇವಸ್ಥಾನಗಳಿದ್ದವು. ಅಲ್ಲಿನ ಕೆತ್ತನೆ, ರಚನೆ, ನನ್ನ ಗಮನ ಸೆಳೆದಿದ್ದವು. ನಮ್ಮೂರಲ್ಲಿ ಒಂದು ದರ್ಗಾ ಇತ್ತು. ಕೆತ್ತನೇ ದೃಷ್ಟಿಯಿಂದ ಸರಳ ಆದರೆ ತುಂಬ ಗಮನ ಸೆಳೆಯುವಂಥದು. ಊರಲ್ಲಿ ಅಲ್ಲಲ್ಲಿ, ಕೆಲವು ತೀರ್ಥಂಕರರ ಮೂರ್ತಿಗಳಿದ್ದವು. ಖರೇನೇ ಹೇಳಬೇಕೆಂದರೆ ದಾರಿ ಬದಿ ಬಿದ್ದಿದ್ದವು. ಅವು ಎತ್ತುಕಟ್ಟುವ ಕಲ್ಲಾಗಿದ್ದವು. (ಇಲ್ಲಿಯೇ ಇತಿಹಾಸ ಕಲಿಸಬಹುದಾದ ಬಹುದೊಡ್ಡ ಜೀವನ ತತ್ವವೂ ಇದೆ ಎಂದು ತೋರುತ್ತದೆ!) ಅಲ್ಲಲ್ಲಿ ಕೆಲವು ಶಾಸನಗಳಿದ್ದವು, ಭಯಭಕ್ತಿಗಳಿಂದ ಎಣ್ಣೆ ಎರೆದು ವಿಭೂತಿ ಕುಂಕುಮ ಹಾಕಿ ಅವುಗಳನ್ನು ನಮ್ಮ ಜನ ಪೂಜಿಸುತ್ತಿದ್ದರು. ನಮ್ಮ ಹೊಲಕ್ಕೆ ಹೋಗುವಾಗ ನಮ್ಮ ಅಜ್ಜಿ ಹೇಳುತ್ತಿದ್ದರು, ‘ಈ ಬೀರದೇವರ ಗುಡೀ ಹಿಂದನ ಕ್ವಾಟಿ-ಕೋಟೆ ಇತ್ತು ಎಪ್ಪಾ’ ಎಂದು.  ದೊಡ್ಡ ಅಗಸೆಬಾಗಿಲು, ದೊಡ್ಡ ಚಾವಡಿ, ಅಲ್ಲಿನ ಕಟ್ಟಿಗೆ ತೊಲೆಗಳಮೇಲೆ ಹಳೆಗನ್ನಡದಲ್ಲಿ ಏನೋ ಬರೆದಿರುವುದು.... ಇವೆಲ್ಲ ಇದ್ದವು.  ಅಂದರೆ, ನಮ್ಮ ಊರಲ್ಲಿ ಇತಿಹಾಸ ಸಂದಿಗೊಂದಿಗಳಲ್ಲಿ ಸಿಕ್ಕಿಕೊಂಡಿದೆ. ಹಾದಿಬದಿಯಲ್ಲಿ ಬಿದ್ದಿದೆ. ಶಾಲೆಯಲ್ಲಿ ಇತಿಹಾಸದ ಪುಸ್ತಕವೂ ಇತ್ತು. ಅದರಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿದ್ದ ಕೈಗೆ ಎಟುಕುತ್ತಿದ್ದ, ಕಾಲಿಗೇ ತಟ್ಟುತ್ತಿದ್ದ ನಮ್ಮೂರಲ್ಲಿನ ಐತಿಹಾಸಿಕ ಒಂದು ಸಂಗತಿಗೂ ಒಂದಿಂಚೂ ಜಾಗವಿರಲಿಲ್ಲ. ಆದರೆ, ರಾಷ್ಟ್ರಕೂಟರ ಬಗ್ಗೆ, ಚಾಲುಕ್ಯ, ಹೊಯ್ಸಳರ ಬಗ್ಗೆ ಇನ್ನೂ ಅನೇಕ ರಾಜಮನೆತನಗಳ ಬಗ್ಗೆ ಪಾಠಗಳಿದ್ದವು. ಪುಸ್ತಕ ನನ್ನ ಹೃದಯವನ್ನೂ ಒಳಗೊಳ್ಳಲಿಲ್ಲ, ಬುದ್ಧಿಯನ್ನೂ ಒಳಗೊಳ್ಳಲಿಲ್ಲ. 

ಹಾಗೆಯೇ, ಕೊರವರ ಹೆಂಗಸರು ‘ಗಂಗವ್ವ ಗೊರವ್ವ ಜೂಜನಾಡಿದರ’ ಎಂಬ ಹಾಡುಗಳು ಮತ್ತು ಆ ಹಾಡುಗಾರ್ತಿಯರು, ಜೋಕುಮಾರನ ಹೊತ್ತು ಬರುತ್ತಿದ್ದ ಊರಹೊರಗಿನ ಅವ್ವಗಳು, ಒಂದು ಕೊಡ ನೀರಿಗಾಗಿ ಗಂಟೆಗಟ್ಟಲೇ ಕಾಯಬೇಕಾಗಿದ್ದ ಯಮನವ್ವನ ಚಿತ್ರ ಇದಾವುದೂ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಕಾಣಿಸಲೇ ಇಲ್ಲ!  ಅದು ಮಾಡಿದ್ದು ಇಷ್ಟೇ: ಪುಸ್ತಕದಲ್ಲಿ ಇದ್ದುದನ್ನು ಬಾಯಲ್ಲಿ, ಗಂಟಲಲ್ಲಿ ಸ್ವಲ್ಪ ಮೆದುಳಲ್ಲಿ ಮಾತ್ರ ಇಟ್ಟುಕೋ ಎಂಬ ಒತ್ತಾಯ. ಇದು ನನಗೆ ಈಗಲೂ ವಿಚಿತ್ರ ಎನಿಸುತ್ತದೆ. ಸಂಪನ್ಮೂಲ ನಾವಿದ್ದಲ್ಲೇ ಇದೆ. ನಿಧಿ ನಮ್ಮ ಬಳಿಯೇ ಇದೆ. ಆದರೆ, ಶಾಲಾಪಠ್ಯಪುಸ್ತಕ ಅದನ್ನು ನೋಡದಂತೆ ತಡೆಗೋಡೆಯಾಗಿದೆ. ಹಾಗಾದರೆ, ಇದರ ಹೊಣೆ ಯಾರದು? ಪಠ್ಯಪುಸ್ತಕದ್ದೇ?! 

ಅಲ್ಲಮನ ಒಂದು ವಚನ : ಅಮೃತ ಸಾಗರದೊಳಗಿದ್ದು ಆಕಳ ಚಿಂತೆಯೇಕೆ? ಮೇರುಗಿರಿಯಲ್ಲಿದ್ದು ಜರಗತೊಳೆವ ಹಂಗೇಕೇ? ಶ್ರೀಗುರುವಿನೊಳಾಗಿದ್ದು ತತ್ವವಿದ್ಯದ ಚಿಂತೆಯೇಕೆ? 

ಹೌದು ಅಮೃತಸಾಗರದಲ್ಲಿ ಇದ್ದೇವೆ, ಅದು ನಮ್ಮ ಹತ್ತಿರವೇ ಇದೆ. ಅದನ್ನು ನಾವು ಒಂದಾಗಬೇಕು ಎಂದರೆ, ನಮ್ಮ ಕಣ್ಣುಗಳು ಮತ್ತು ಕಿವಿಗಳು ಸಮಸ್ತ ಇಂದ್ರಿಯಗಳು ತೆರೆದುಕೊಳಬೇಕು. ಇಲ್ಲಿಯೇ ಸಂಪನ್ಮೂಲದ ಪ್ರಶ್ನೆ ಏಳುವುದು. ಆದ್ದರಿಂದಲೇ ಆರಂಭದಲ್ಲಿ ಹೇಳಿದ್ದು ಸಂಪನ್ಮೂಲ ಎಂಬುದು ಕೇವಲ ವಸ್ತುವಲ್ಲ, ಅದೊಂದು ದೃಷ್ಟಿಕೋನ ಎಂದು. 

ಹಾಗಿದ್ದರೆ, ಈ ಕೋವಿಡ್ ಸಂದರ್ಭ ಮತ್ತು ತದ ನಂತರವೂ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳುವ ಜವಾಬ್ದಾರಿ ನಾವು ತೆಗೆದುಕೊಳಬೇಕು. ನನ್ನ ಆಯ್ಕೆಯ ವಿಷಯಗಳ ಮಿತಿಯಲ್ಲಿಯೇ ಹೇಳುವುದಾದರೂ,  ನಾವು ನಾವು ಇರುವ ಸ್ಥಳಗಳಲ್ಲಿನ ಸಾಮಾಜಿಕ, ಐತಿಹಾಸಿಕ, ಭೌಗೋಳಿಕ ವಾಸ್ತವಗಳು, ಭಾಷಿಕ ಸಂಗತಿಗಳು ನಮ್ಮ ಮತ್ತು ನಮ್ಮ ಮಕ್ಕಳನ್ನು ತಮ್ಮತ್ತ ಕರೆಯುತ್ತಿರುತ್ತವೆ ಎಂಬುದನ್ನು ಅಲ್ಲಗಳೆಯದೇ,  ನಾವು ಅಲ್ಲಿಗೆ ಕೆಲವು ಮಕ್ಕಳೊಂದಿಗೆ ಹೋಗಬೇಕು, ನೋಡಬೇಕು, ದಾಖಲಿಸಬೇಕು, ಅರ್ಥಮಾಡಿಕೊಳ್ಳಬೇಕು, ಕೊನೆಗೆ ಬರೆಯಬೇಕು. 

ಇದು ಕೇವಲ ಥಿಯರಿಯೇ ಎಂಬ ಪ್ರಶ್ನೆ ಏಳಬಹುದು. ಇದಕ್ಕೆ ನನ್ನ ಉತ್ತರ ಅಲ್ಲ ಎಂಬುದೇ. ಕೋವಿಡ್ ೧೯ರ ಸಮಯದಲ್ಲಿಯೇ, ಲಾಕ ಡೌನ್ ಸಡಿಲುಗೊಂಡ ಹಂತದಲ್ಲಿ ನಡೆದ  ವಾಸ್ತವಿಕವಾದ ಕೆಲವು ಉದಾರಣೆ ಇಲ್ಲಿಕೊಡುತ್ತೇನೆ. ಒಂದು ನಮ್ಮ ಶ್ರೀನಿವಾಸ ಮಾಡಿದ್ದು. ಅವರ ಸ್ವಂತ ಊರು ಪಾವಗಡ ಹತ್ತಿರದ  ವಾಯ್.ಟಿ.ರೆಡ್ಡಿಹಳ್ಳಿ  ಎಂಬ ಚಿಕ್ಕ ಊರು. ಶ್ರೀನಿವಾಸ ಹೇಳಿದರು ಫೋನ್ ಮಾಡಿ,‘ಸರ್ ನಮ್ಮಲ್ಲಿ ಹತ್ತು ಹನ್ನೆರಡು ಹಳೆ ಭಾವಿ ಇವೆ’ ಅಂತ. ‘ನೀರಿದೆಯೆ?’ ಎಂದು ಕೇಳಿದ್ದಕ್ಕೆ ಇಲ್ಲ ಎಂದರು. ‘ಕಟ್ಟಡ, ಗಡಗಡೆ ಇವೆಯೆ’ ಎಂದು ಕೇಳಿದೆ. ‘ಇವೆ, ಆದರೆ ಹಾಳಗಿವೆ’. ‘ಸರಿ ಚಿಂತೆಯಿಲ್ಲ, ಅವುಗಳ ಕಿರುಅಧ್ಯಯನ ಮಾಡಿ ಒಂದು ವಿಡಿಯೋ ಲೇಖನ ಮಾಡಿ’ ಅಂದೆ. ಅದಕ್ಕೆ ಬೇಕಾದ ಮಾರ್ಗದರ್ಶನ ಫೋನ್ ಮೂಲಕವೇ ನೀಡುತ್ತಿದ್ದೆ. ಧ್ವನಿಯಲ್ಲಿ ಹತ್ತಾರು ವರ್ಷಗಳಿಂದ ಇರುವ ಶ್ರೀನಿವಾಸ ಅವರಿಗೆ ಈ ಬಗೆಯ ಅಧ್ಯಾಯನದ ದಾರಿಕೂಡ ಗೊತ್ತಿತ್ತು. ಈಗ ಇದೇ ಕೋವಿಡ್ ಸಂದರ್ಭದ ಸಾಮಾಜಿಕ ಅಧ್ಯಯನದ ಒಂದು ವಿಡಿಯೋ ಲೇಖನ ಸಿದ್ಧವಾಗುತ್ತಿದೆ. ಇನ್ನೊಂದು ಉದಾರಣೆ, ಗದಗ ಜಿಲ್ಲೆ ರೋಣ ತಾಲೂಕಿನ ಒಂದು ಗ್ರಾಮ ಸವಡಿ/ಚವಡಿ. ಇಲ್ಲಿನ ದೇವಾಲಯಗಳ ಅಧ್ಯಯನ ಈಗಾಗಲೇ   ಸುಲೆಮಾನ್ ಎನ್ನುವವರು ಮಾಡಿದ್ದಾರೆ. ಆ ಸಂಪ್ರಂಬಂಧದ ಆಧಾರದ ಮೇಲೆ, ನಮ್ಮ ಧ್ವನಿ ಶೈ.ಸಂ.ಕೇಂದ್ರದ   ಸಂಗಮೆಶ ಮತ್ತು ಅವರ ಪತ್ನಿ   ಸರಸ್ವತಿಯವರು ಮರು ಅಧ್ಯಯನ ಮಾಡಿದ್ದಾರೆ. ಆ ಲೇಖನವೂ ಸಿದ್ಧವಾಗುತ್ತಿದೆ.  ಮಹಾದೇವಿ ಪೊಮೋಜಿಯವರು ಧಾರವಾಡದ ಬಳಿಯ ತಮ್ಮ ಹಳ್ಳಿಯಿಂದ ಹೊಸ ಗಾದೆ ಮಾತುಗಳನ್ನು ಸಂಗ್ರಹಿಸಿದ್ದಾರೆ, ಗಂಗಾಧರ, ಶ್ರೀದೇವಿ ಸ್ವಂತ ಕತೆಗಳ ರಚನೆ ಮಾಡಿದ್ದಾರೆ;  ಕಥಾವಾಚನ, ಗೊಂಬೆಯಾಟಗಳೂ ಇದೇ ಅವಧಿಯಲ್ಲಿ ಚೇತನ್ ಮತ್ತು ದೀಪಾ ಅವರಿಂದ ಸಾಧ್ಯವಾಗಿದೆ. ಪ್ರೇಮಾ ಶಿವಾನಂದ ಅವರು ಹೊಸ ಕಥೆಗಳನ್ನು ರಚನೆ ಮಾಡಿದ್ದಾರೆ,...  ಇನ್ನು ಕೆಲವು ದಿನಗಳಲ್ಲಿ ಈ ಎಲ್ಲ ಕೋವೀಡ್ ಸಂದರ್ಭದ ಅಧ್ಯಯನಗಳು ಸಾರ್ವಜನಿಕವಾಗಿ ಲಭ್ಯವಾಗಲಿವೆ. 

ಈ ಥರದ ಕೆಲಸಗಳು ಬೇರೆಯವರಿಂದಲೂ ಆಗಿವೆ. ತಕ್ಷಣ ನೆನಪಿಗೆ ಬರುತ್ತಿರುವುದು ನಮ್ಮ ಗದುಗಿನ ವಿವೇಕಾಂದ ಪಾಟೀಲರ ಬ್ಲೊಗಿನ ನೆನಪು...

‘ಇದೆಲ್ಲ ಆಯಿತು, ನೀನೆನ್ ಮಾಡೀ ತಮ್ಮಾ?’ಎಂದು ಯಾರಾದರೂ ಕೇಳಬಹುದು. ಅದಕ್ಕೆ ನಮ್ರವಾದ ನನ್ನ ಉತ್ತರ ಹೀಗಿದೆ. ಈ ಕೋವಿಡ್ ಹೊತ್ತಲ್ಲಿ ನಮ್ಮ ಮನೆಯಲ್ಲಿ ಸಾಹಿತ್ಯಮೇಳ ನಡೆದಿದೆ! ಅದು ಇನ್ನೂ ನಡೆಯುತ್ತಿದೆ. ಹರಿಹರನ ಎಂಟು ಹತ್ತು ರಗಳೆಗಳನ್ನು ಹಾಡಿದ್ದೇವೆ - ಅಧ್ಯಯನ ಮಾಡಿದ್ದೇವೆ. ಇದರಲ್ಲಿ ಎಂಟು ವರ್ಷದ ಬಾಲಕಿಯಿಂದ ಹಿಡಿದುಕೊಂಡು ೮೦ ವರ್ಷದ ವೃದ್ಧರ ವರೆಗೂ ಎಲ್ಲರೂ ಭಾಗವಹಿಸಿದ್ದೇವೆ. ಚಾಮರಸನ ಪ್ರಭುಲಿಂಗಲೀಲೆ ನಾನು ನಮ್ಮ ಮನೆಯವರು ಓದುತ್ತಿದ್ದೇವೆ. ಶ್ರೀ ಅರವಿಂದರ ಸಾವಿತ್ರಿ ಮಾಹಾ ಕಾವ್ಯದ ಅಧ್ಯಯನವನ್ನು ನಾನು ಮತ್ತು ನನ್ನ ಮಗಳು ಮಾಡುತ್ತಿದ್ದೇವೆ. ಇದರ ಜೊತೆಗೆ 

ಇದು ಒಂದು ಬಗೆಯ ಬೌದ್ಧಿಕ ಚಟುವಟಿಕೆ ಅನಿಸಬಹುದು. ಆದರೆ, ಅದು ಪೂರ್ಣ ಸತ್ಯವಲ್ಲ. ಈ ಕಾವ್ಯ ಕಥೆ ಮುಂತಾದವುಗಳ ಸಹವಾಸ ನಮ್ಮ ಮನಸ್ಸಿಗೆ ಮುದನೀಡಿವೆ. ಸಂಸ್ಕಾರ ನೀಡಿವೆ. ನಮ್ಮನ್ನು ಬೇಳೆಸಿವೆ. ಉಳಿಸಿವೆ. 

ಆದರೂ ಓದು ಬರೆಹಗಳ ಹೊರತಾಗಿಯೂ ಏನೆಲ್ಲ ಹೊಸ ಶಿಕ್ಷಣ ಮರುಶಿಕ್ಷಣ ನಮಗಾಗಿದೆ ಎಂದರೆ ನನಗೇ ಅಚ್ಚರಿಯಾಗುತ್ತದೆ. ನಮ್ಮ ಗದಗು ಕುಮಾರವ್ಯಾಸ ತೋಂಟದಾರ್ಯ ಮಠ ವೀರನಾರಾಯಣನ ಗುಡಿಗೆ ಹೆಸರುವಾಸಿಯಾಗಿರುವಂತೆ, ಗಿರ್ಮಿಟ್ ಮಿರ್ಚಿಗೂ ಬಲು ಹೆಸರುವಾಸಿ. ಅದನ್ನು ನಾನು ಪುನಃ ಪ್ರಯೋಗ ಮಾಡಿದೆ. ನಮ್ಮ ಹೊಲದಲ್ಲಿ ಸಂಪೂರ್ಣ ಸಾವಯವ ರೀತಿಯಲ್ಲಿ ಬೆಳೆದ ಬಿಳಿಜೋಳ, ಗೋದಿ, ಕಡ್ಲೆ, ಶೇಂಗಾ, ಅಗಸೆ, ಹುಚ್ಚೆಳ್ಳು ಮತ್ತೆ ಮತ್ತೆ ನಮ್ಮನ್ನು ಪುನರ್ಕಲಿಕೆಗೆ ಒಳಪಡಿಸಿವೆ. 

ಹೀಗೇ ಕೇವಲ ಚಟುವಟಿಕೆ, ಕೇವಲ ಅಡುಗೆ ಮಾಡಿ, ಮಿರ್ಚಿ ಮಾಡುವುದರಿಂದ ಕಲಿಕೆಯಾಗುತ್ತದೆ? ಎಂದರೆ ನನ್ನ ಉತ್ತರ ಖಂಡಿತ ಇಲ್ಲ. ಈ ಕ್ರಿಯೆಗಳನ್ನು ಮಾಡುತ್ತ ನಮಗೆ ಒದಗುವ ಅನುಭವಗಳನ್ನು ಅಧ್ಯಯನ ಕ್ರಮಕ್ಕೆ ಅಳವಡಿಸ್ಕೊಂಡಾಗ ಮಾತ್ರ ಅಲ್ಲಿ ಕಲಿಕೆಯಾಗುತ್ತದೆ. ಆ ಕಲಿಕೆಯನ್ನು ಹಂಚಿಕೊಂಡಾಗ ಬರಹ ಇತ್ಯಾದಿ ರೂಪದಲ್ಲಿ ಅದಕ್ಕೊಂದು ಪೂರ್ಣತೆ ಬರುತ್ತದೆ. ಇದು ಅಸಾಧ್ಯದ ಮಾತೆ? 

ಶಿಕ್ಷಣವನ್ನೇ ಕೇಂದ್ರವಾಗಿಟ್ಟುಕೊಂಡು ಕೆಲವು ಪ್ರಶ್ನೆಗಳೊಂದಿಗೆ ನನ್ನ ಮಾತು ಮುಗಿಸುತ್ತೇನೆ: ಯಾವುದು ಸಂಪನ್ಮೂಲವಲ್ಲ? ಯಾವುದು ಕಲಿಕೆಯಲ್ಲ? ಕಲಿಕೆಗೆ ಆನ್ ಲೈನ್ ಶಿಕ್ಷಣದ ಸಾಧ್ಯತೆಗಳನ್ನಾಗಲೀ, ಮುಖಾಮುಖಿ ಶಿಕ್ಷಣದ ದಾರಿಗಳನ್ನಾಗಲೀ ಬೇರೆ ಬೇರೆ ಎಂದು ನೋಡದೇ ನಿಜವಾದ ಕಲಿಕೆಯ ಪ್ರಕ್ರಿಯೆಗೆ ಇವೆಲ್ಲವನ್ನೂ ಬಳಸುವ ವಿವೇಚನಾ ಪಥ ಹುಡುಕಬಹುದೆ? ನಾವೆಲ್ಲ ಶಿಕ್ಷಕರಾಗಿಯೋ, ಮುಖ್ಯ ಶಿಕ್ಷಕರಾಗಿಯೋ, ಶಿಕ್ಷಣಾಧಿಕಾರಿಗಳಾಗಿಯೋ, ಶಿಕ್ಷಣ ಸಚಿವರಾಗಿಯೋ ಈ ಕ್ಷೇತ್ರದಲ್ಲಿ ಜೀವನ ಕಳೆಯುತ್ತೇವೆ ಎನ್ನುವುದಾದರೆ, ಈ ೩೦-೩೫ ವರ್ಷಗಳ ನಮ್ಮ ಅನುಭವವೇ ಒಂದು ಸಂಪನ್ಮೂಲವಾಗಬಾರದೇಕೆ? ಅದೊಂದು ಜ್ಞಾನಗಟ್ಟಿ ಆಗಬಾರದೇಕೆ? ಅರಿವಿನ ಸಾಮರಸ್ಯದ ಸುಂದರ ಸಮಾಜ ಕಟ್ಟುವಲ್ಲಿ ನಮ್ಮ ಈ ಅನುಭವ - ಜ್ಞಾನ ಉಪಯೋಗಕ್ಕೆ ಬರದೇ ಇದ್ದರೆ, ಇನ್ನೆಲ್ಲಿ ಹುಡುಕಬೇಕು, ನಮ್ಮ ಸಮಾಜ ಮಾತೆ?  

Comments

Popular posts from this blog

ಶಿಕ್ಷಕರ ಕಲ್ಯಾಣ ನಿಧಿಯ ಆನ್ಲೈನ್ ಸೇವೆಗಳು